ಪ್ಲ್ಯಾಂಕ್, ಮ್ಯಾಕ್ಸ್ ಕಾರ್ಲ್ ಎನ್ಸ್ರ್ಟ್ ಲುಡ್ವಿಗ್
	1858-1947. ಭೌತವಿಜ್ಞಾನಿ. ಕ್ವಾಂಟಮ್ ಬಲವಿಜ್ಞಾನದ (ಕ್ವಾಂಟಮ್ ಮೆಕ್ಯಾನಿಕ್ಸ್) ಪ್ರವರ್ತನಕಾರ. ಪರಮಾಣು ಪ್ರಪಂಚವನ್ನು ಕುರಿತ ಈ ಕ್ರಾಂತಿಕಾರಕ ವ್ಯಾಖ್ಯಾನ ಆ ತನಕ (1900) ಪ್ರಚಲಿತವಾಗಿದ್ದ ಅಭಿಜಾತ ಭೌತವಿಜ್ಞಾನದ (ಕ್ಲಾಸಿಕಲ್ ಫಿಸಿಕ್, ನ್ಯೂಟೋನಿಯನ್ ಫಿಸಿಕ್ಸ್ ಎಂದೂ ಹೇಳುವುದುಂಟು) ಮುನ್ನಡೆಯಲ್ಲಿ ಒಂದು ಪರ್ವ ಬಿಂದುವಾಯಿತು. ಕ್ವಾಂಟಮ್ ಬಲವಿಜ್ಞಾನದ ಪ್ರಕಟಣೆ (14 ಡಿಸೆಂಬರ್ 1900) ಆದ ಬಳಿಕ ಭೌತವಿಜ್ಞಾನದ ಅಂತೆಯೇ ಪ್ರಪಂಚದ ಮುಖವೇ ಬದಲಾಗಿ ಹೋಯಿತು.

	ಕೀಲ್, ಶ್ಲೆಸ್ವಿಗ್ಗಿನಲ್ಲಿ 1858 ಏಪ್ರಿಲ್ 23ರಂದು ಜನಿಸಿದ ಪ್ಲ್ಯಾಂಕ್ ಅವರ ವಿದ್ಯಾಭ್ಯಾಸ ಮೊದಲು ಮ್ಯೂನಿಕ್, ತರುವಾಯ ಬರ್ಲಿನ್ ವಿಶ್ವವಿದ್ಯಾಲಯಗಳಲ್ಲಿ ಜರುಗಿತು. ಬರ್ಲಿನ್ನಿನಲ್ಲಿ ಪ್ರಸಿದ್ಧ ಭೌತವಿಜ್ಞಾನಿಗಳಾದ ಹೆಲ್ಮ್‍ಹೋಲ್ಟ್ಸ್ ಮತ್ತು ಕಿರ್ಖಾಫ್ ಇವರ ಗುರುಗಳಾಗಿದ್ದರು. ಮ್ಯೂನಿಕ್ಕಿನಲ್ಲಿ ಅಧ್ಯಾಪಕರಾಗಿ ನೇಮಕಗೊಂಡು (1880) ಉಷ್ಣಗತಿವಿಜ್ಞಾನದ ಎರಡನೆಯ ನಿಯಮದ ಬಗ್ಗೆ ಸಂಶೋಧನೆ ನಡೆಸಿ ಡಾಕ್ಟರೇಟ್ ಪದವಿ ಪಡೆದರು. 1885 ಮೇ ತಿಂಗಳಲ್ಲಿ ಕೀಲ್ ವಿಶ್ವವಿದ್ಯಾಲಯದ ಎಕ್ಸ್‍ಟ್ರಾ ಆರ್ಡಿನರಿ ಪ್ರಾಧ್ಯಾಪಕರಾಗಿ ನೇಮಕಗೊಂಡರು.

	ಪ್ಲ್ಯಾಂಕ್ ಅವರ ಮೊದಲ ಹೆಂಡತಿ ಮೇರಿ. ಈಕೆ 1909ರಲ್ಲಿ ನಿಧನಹೊಂದಿದ ಬಳಿಕ ಈಕೆಯ ಸಂಬಂಧಿಯಾದ ಮಾರ್ದಫಾನ್‍ಹೇಸ್ಲಿನ್ ಎಂಬಾಕೆಯನ್ನು ಮರುಮದುವೆಯಾದರು. 1888ರಲ್ಲಿ ಬರ್ಲಿನ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಭೌತವಿಜ್ಞಾನದ ಅನೇಕ ವಿಷಯಗಳ ಬಗ್ಗೆ, ಅದರಲ್ಲೂ ಉಷ್ಣಗತಿ ವಿಜ್ಞಾನದ ಬಗ್ಗೆ ಅಧ್ಯಯನ ನಡೆಸಿದರು. ವಿಜ್ಞಾನದ ಚರಿತ್ರೆ ಮತ್ತು ಪಿಯಾನೊ ವಾದನಗಳಲ್ಲಿ ಇವರಿಗೆ ತುಂಬ ಆಸಕ್ತಿ. ತಮ್ಮ ಅನೇಕ ಪ್ರಬಂಧಗಳಲ್ಲಿ ಸುದೀರ್ಘ 30-40 ಪುಟಗಳವರೆಗೂ ಚಾರಿತ್ರಿಕ ಟಿಪ್ಪಣಿಗಳನ್ನು ಬರೆಯುತ್ತಿದ್ದುದು ಇವರ ಕ್ರಮ. ಫಿಸಿಕಲಿಷ್ ಗೆಸೇಲ್‍ಶಾಫ್ಟ್ ಜು ಬರ್ಲಿನ್ ಮತ್ತು ಕೋನಿಗ್ ಲಿಷ್-ಪ್ರೊಸಿಷೆ ಅಕ್ಯಾಡೆಮಿ ಡರ್ ವಿಸೆನ್‍ಶಾಫ್ಟ್‍ನ್ ಎಂಬ ವೈಜ್ಞಾನಿಕ ಸಂಘಗಳ ಸದಸ್ಯರಾಗಿ ಆಯ್ಕೆಗೊಂಡರು (1894).

	ಸಹೃದಯತೆ ಸೌಜನ್ಯಗಳಿಗೆ ಹೆಸರಾಂತ ಮಹಾನುಭಾವ ಪ್ಲ್ಯಾಂಕ್. ಐನ್‍ಸ್ಟೈನರ ಯುಗಪ್ರವರ್ತಕ ಸಂಶೋಧನ ಪ್ರಬಂಧ ಮೊದಲಬಾರಿಗೆ ಲೈಪ್ಝಿಗದಗಿನ ಅನಲನ್ ಡರ್ ಫಿಸೀಕ್ ನಿಯತಕಾಲಿಕೆಗೆ ಪ್ರಕಟಣೆಗೋಸ್ಕರ ಬಂದಾಗ (1905)-ಆಗ ಐನ್‍ಸ್ಟೈನ್ ಅಪ್ರಸಿದ್ಧ ಅನಾಮಧೇಯ ಏಕಸ್ವ ಕಛೇರಿ ಗುಮಾಸ್ತ-ಅದನ್ನು ಪರಿಶೀಲಿಸಿ ಅದರಲ್ಲಿದ್ದ ಹೊಚ್ಚಹೊಸತನ ಗುರುತಿಸಿ, ಅದು ಅನೇಕ ಕಡೆಗಳಲ್ಲಿ ತನ್ನ (ಪ್ಲ್ಯಾಂಕರ) ಫಲಿತಾಂಶಗಳನ್ನು ಒಪ್ಪದೇ ಇದ್ದಾಗ್ಯೂ ಅದನ್ನು ನಿರಪೇಕ್ಷ ವೈಜ್ಞಾನಿಕದೃಷ್ಟಿಯಿಂದ ಪರಾಮರ್ಶಿಸಿ, ಮುದ್ರಣಕ್ಕೆ ಶಿಫಾರಸು ಮಾಡಿದವರು ಪ್ಲ್ಯಾಂಕ್. ಇವರಾಗ ಕೊಂಚ ಸಣ್ಣತನವನ್ನೇನಾದರೂ ಪ್ರಕಟಿಸಿದ್ದಾಗಿದ್ದರೆ-ಮಾನವ ಪ್ರಪಂಚದಲ್ಲಿ ಹೇಗೋ ವಿಜ್ಞಾನಪ್ರಪಂಚದಲ್ಲಿ ಹಾಗೆ ಸಣ್ಣತನದ ಪ್ರದರ್ಶನ ಅಪೂರ್ವ ಘಟನೆ ಏನೂ ಅಲ್ಲ-ಐನ್‍ಸ್ಟೈನರ ಅಂತೆಯೇ ನೂತನ ಭೌತವಿಜ್ಞಾನದ ಗತಿ ಏನಾಗಿರುತ್ತಿತ್ತು ಎಂಬುದನ್ನು ಊಹಿಸುವುದು ಕಷ್ಟ. ಮುಂದೆ ಐನ್‍ಸ್ಟೈನರನ್ನು ಬರ್ಲಿನ್ನಿಗೆ ಆಮಂತ್ರಿಸಿ ಕರೆತರುವಲ್ಲಿ, ಇವರಿಗೆ ಅಲ್ಲಿ ಯೋಗ್ಯ ಕಾರ್ಯಸೌಕರ್ಯ ಒದಗಿಸಿಕೊಡುವುದರಲ್ಲಿ, ನಾಟ್ಸಿಗಳಿಂದ ಯಹೂದ್ಯರ ಎದುರಾಗಿ ಭೀಕರ ಹತ್ಯಾಕಾಂಡ ಆರಂಭವಾದಾಗ ಆಡಳಿತಶಾಹಿಯ ಎದುರು ದಿಟ್ಟತನದಿಂದ ನಿಂತು ನಿರಾಶ್ರಿತರಿಗೆ ರಕ್ಷಣೆ ಒದಗಿಸುವುದುರಲ್ಲಿ, ಎರಡನೆಯ ಮಹಾಯುದ್ಧದ ಕಡುಬೇಗೆಯ ದಿನಗಳಲ್ಲಿ ಕೂಡ ಹಿಟ್ಲರ್ ಶಾಹಿಯೊಡನೆ ಎಂದೂ ಸಹಕರಿಸದೆ ವಿಜ್ಞಾನವನ್ನು ಯುದ್ಧ ಪ್ರಯತ್ನಗಳಿಗೆ ಅಧೀನಗೊಳಿಸದಿರುವುದರಲ್ಲಿ, ಇತ್ಯಾದಿ, ಪ್ಲ್ಯಾಂಕ್ ಅದ್ವಿತೀಯ ಪಾತ್ರವಹಿಸಿದ್ದರು.
1930ರಲ್ಲಿ ಪ್ಲ್ಯಾಂಕ್ ಬರ್ಲಿನ್ನಿನ ಕೈಸರ್ ವಿಲ್‍ಹೆಲ್ಮ್ ಸೊಸೈಟಿಯ ಅಧ್ಯಕ್ಷರಾದರು. ಇವರ ವೈಜ್ಞಾನಿಕ ಸಿದ್ಧಿಸಾಧನೆಗಳನ್ನು ಗಮನಿಸಿದ ಆಡಳಿತ ಈ ಸೊಸೈಟಿಯನ್ನು ಮ್ಯಾಕ್ಸ್ ಪ್ಲ್ಯಾಂಕ್ ಸೊಸೈಟಿ ಎಂಬುದಾಗಿ ಪುನರ್ನಾಮಕರಣ ಮಾಡಿತು. ಆದರೆ ಮುಂದೆ ಹಿಟ್ಲರ್‍ಶಾಹಿಯೊಡನೆ ತಲೆದೋರಿದ ಮತಭೇದದ ಪರಿಣಾಮವಾಗಿ ಪ್ಲ್ಯಾಂಕ್ 1937ರಲ್ಲಿ ಅಧ್ಯಕ್ಷ ಪದವಿಗೆ ರಾಜಿನಾಮೆ ನೀಡಿ ಹೊರಬರಬೇಕಾಯಿತು. ಪ್ಲ್ಯಾಕರ ಒಬ್ಬ ಮಗ ಯುದ್ಧ ದಿನಗಳಂದು ಬಾಂಬ್ ಧಾಳಿಗೆ ಈಡಾಗಿ ಮಡಿದ. ಇನ್ನೊಬ್ಬ ಮಗನ ಮೆಲೆ ಹಿಟ್ಲರನ ಕೊಲೆಸಂಚಿನ ಪಿತೂರಿ ಹೇರಿ ಅವನನ್ನು ವಧೆ ಮಾಡಲಾಯಿತು. ಯುದ್ಧ ಮುಗಿದ ಗೊಂದಲ ಪರಿಸ್ಥಿತಿಯಲ್ಲಿ, 1945, ಎಂಬತ್ತೇಳರ ವೃದ್ಧ ಪ್ಲ್ಯಾಂಕರನ್ನು ಅಮೆರಿಕನ್ ಪಡೆಗಳು ರಕ್ಷಿಸಿದುವು, ನಾಟ್ಸೀ ಪತನಾನಂತರ ಮತ್ತೆ ಪ್ಲ್ಯಾಂಕರಿಗೆ ಅವರ ಪೂರ್ವ ಸ್ಥಾನವನು-ಮ್ಯಾಕಜ್ಸ್‍ಪ್ಲ್ಯಾಂಕ್ ಸೊಸೈಟಿಯ ಅಧ್ಯಕ್ಷಪದವಿ-ನೀಡಿ ಗೌರವಿಸಲಾಯಿತು. 1947 ಅಕ್ಟೋಬರ್ 3ರಂದು ಗಟಿಂಗನ್ನಿನಲ್ಲಿ ಮಡಿದರು.

	ಕ್ವಾಂಟಮ್ ಬಲವಿಜ್ಞಾನ: ಕಪ್ಪು ವಸ್ತು ವಿಕಿರಿಸುವ ಮತ್ತು ಹೀರುವ ಬೆಳಕಿನ ಆವರ್ತಾಂಕಕ್ಕೆ ಅನುಗುಣವಾಗಿರುವ ವಿತರಣೋತ್ಪನ್ನದ ಬಗ್ಗೆ ಪ್ಲಯಾಂಕ್ ನಡೆಸಿದ ಸಂಶೋಧನೆಗಳಿಂದಾಗಿ ಬೆಳಕಿನ ಶಕ್ತಿ ಕ್ವಾಂಟಮುಗಳೆಂಬ ಕಣಗಳೋಪಾದಿಯಲ್ಲಿ ವಿಕಿರಿಸಲ್ಪಡುತ್ತದೆ ಮತ್ತು ಹೀರಲ್ಪಡುತ್ತದೆ ಎಂದು ಮನಗಂಡರು. ಈ ಕ್ವಾಂಟಮುಗಳ ಶಕ್ತಿ ಇ=hv. ಇಲ್ಲಿ h ಒಂದು ನಿಯತಾಂಕ. ಇದಕ್ಕೆ ಪ್ಲ್ಯಾಂಕನ ನಿಯತಾಂಕವೆಂದು ಹೆಸರು. ಇದರ ಮೌಲ್ಯ ಸುಮಾರು 6.63*10-34 ಜೌಲ್ ಸೆಕೆಂಡುಗಳು.	

	ಕಪ್ಪುವಸ್ತುಗಳ ರೋಹಿತದ ತಾತ್ತ್ವಿಕ ಸಂಶೋದನೆಯನ್ನು ಪ್ಲ್ಯಾಂಕ್ ತೊಡಗಿದರು. ವೀನ್‍ನಿಯಮ ರೋಹಿತದ ಕಡಿಮೆ ಅಲೆಯುದ್ಧದ ಭಾಗವನ್ನೂ ರ್ಯಾಲೇ ನಿಯಮ ಹೆಚ್ಚು ಅಲೆಯುದ್ಧದ ಭಾಗವನ್ನೂ ವಿವರಿಸುತ್ತಿದ್ದುವು. ಆದರೆ ಶಕ್ತಿ ಗರಿಷ್ಠವಾಗಿರುವ ಮಧ್ಯದ ಭಾಗವನ್ನು ಇವು ವಿವರಿಸಲಾರದವಾಗಿದ್ದವು. ಇವೆರಡು ನಿಯಮಗಳನ್ನು ಸಂಯೋಜಿಸುವುದು ಪ್ಲ್ಯಾಂಕರಿಗೆ 1900ರ ಅಕ್ಟೋಬರಿನಲ್ಲೇ ಸಿದ್ಧಿಸಿತ್ತಾದರೂ ಇದರ ಪೂರ್ಣ ತಾತ್ತ್ವಿಕ ಗೂಢಾರ್ಥ ಡಿಸೆಂಬರಿನ ಹೊತ್ತಿಗೆ ಮಾತ್ರ ಸಾಕ್ಷಾತ್ಕಾರವಾಯಿತು, ಅಷ್ಟೆ. ಆಗ ಎಲ್ಲರಿಂದಲೂ ಮಾನ್ಯ ಮಾಡಲ್ಪಟ್ಟಿದ್ದ ಬೆಳಕಿನ ಅಲೆ ಸಿದ್ಧಾಂತಕ್ಕೆ ಈ ಕ್ವಾಂಟಮ್ ಸಿದ್ಧಾಂತ ಸವಾಲಾಯಿತು. ಈ ಕಾರಣದಿಂದಾಗಿ ಮೊದಮೊದಲು ಅನೆಕ ವಿಜ್ಞಾನಿಗಳು ಕ್ವಾಂಟಮ್ ಸಿದ್ಧಾಂತದ ಬಗ್ಗೆ ಸಂದೇಹಗಳನ್ನು ವ್ಯಕ್ತಪಡಿಸಿದರು. ಅಣುಗಳಿಂದ ವಿಕಿರಿಸಲ್ಪಡುವ ಬೆಳಕಿನ ರೋಹಿತವನ್ನು ವಿವರಿಸಲು ನೀಲ್ಸ್ ಬೋರ್ (1885-1962) ಕ್ವಾಂಟಮ್ ಸಿದ್ಧಾಂತವನ್ನು ಅತ್ಯಂತ ಯಶಸ್ವಿಯಾಗಿ ಉಪಯೋಗಿಸಿದ (1913) ಬಳಿಕ ಇದಕ್ಕೆ ಸಾರ್ವತ್ರಿಕ ಮನ್ನಣೆ ಸಿದ್ಧಿಸಿತು. ಆದರೆ ಇಲ್ಲಿಂದ ಮುಂದಕ್ಕೆ ಈ ಸಿದ್ಧಾಂತದ ಬೆಳವಣಿಗೆಗೆ ಸ್ವತಃ ಪ್ಲ್ಯಾಂಕರಿಂದ ಯಾವ ಕೊಡುಗೆಯೂ ಒದಗದಿದ್ದುದೊಂದು ಅಚ್ಚರಿಯ ಸಂಗತಿ.
(ಎನ್.ವಿ.ಎಂ.)